ಕುಪ್ಪಿಗಿಡ

  ಯೂಪೋರ್ಬಿಯೇಸೀ ಕುಟುಂಬಕ್ಕೆ ಸೇರಿದ ಪುಟ್ಟ ಏಕವಾರ್ಷಿಕ ಸಸ್ಯ. ಅಕ್ಯಾಲಿಫ ಇಂಡಿಕ ಎಂಬುದು ಇದರ ವೈಜ್ಞಾನಿಕ ನಾಮ. ಕನ್ನಡದಲ್ಲಿ ತುಪ್ಪಕೀರೆ ಎಂಬ ಹೆಸರೂ ಇದೆ. ಭಾರತದ ಬಯಲುಸೀಮೆಯಲ್ಲೆಲ್ಲ ಇದು ಬಹು ಸಾಮಾನ್ಯವಾಗಿ ಬೆಳೆಯುತ್ತದೆ. ಬೇಸಾಯದ ಭೂಮಿಯಲ್ಲಿ, ರಸ್ತೆಗಳ ಅಕ್ಕಪಕ್ಕದಲ್ಲಿ, ತೋಟಗಳಲ್ಲಿ ಕಳೆಯುವ ಮೂಲಿಕೆ ಸಸ್ಯವಿದು. ಇದರ ಎತ್ತರ ಸುಮಾರು 1'-2'. ಎಲೆಗಳು ಸರಳ, ಪರ್ಯಾಯವಾಗಿ ಜೋಡಣೆಗೊಂಡಿವೆ. ಅವಕ್ಕೆ ಉದ್ದನೆಯ ತೊಟ್ಟಿದೆ. ಎಲೆಗಳ ಅಂಚುಗರಗಸದಂತೆ. ಹೂಗಳು ಏಕಲಿಂಗಿಗಳು, ಚಿಕ್ಕ ಗಾತ್ರದವು, ಎಲೆಗಳ ಕಂಕುಳಲ್ಲಿ ಹುಟ್ಟುವ ಅಂತ್ಯಾರಂಭಿ ಮಾದರಿಯ ಹೂಗೊಂಚಲುಗಳಲ್ಲಿ ಸಮಾವೇಶಗೊಡಿವೆ. ಗಂಡು ಮತ್ತು ಹೆಣ್ಣು ಹೂಗಳೆರಡಲ್ಲೂ 4 ಪತ್ರಗಳಿಂದಾದ ಪುಷ್ಪಪಾತ್ರೆಯಿದೆ. ದಳಗಳಿಲ್ಲ. ಗಂಡುಹೂವಿನಲ್ಲಿ ಬಿಡಿಬಿಡಿಯಾದ 8 ಕೇಸರಗಳೂ ಹೆಣ್ಣುಹೂವಿನಲ್ಲಿ 3 ಕಾರ್ಪೆಲ್ಗಳಿಂದ ಕೂಡಿದ ಉಚ್ಚಸ್ಧಾನದ ಅಂಡಾಶಯವೂ ಇವೆ. ಕಾಯಿ 3 ಬೀಜಗಳುಳ್ಳ ಸಂಪುಟ ಮಾದರಿಯದು. ಒಣಗಿದಾಗ ಒಡೆಯುತ್ತದೆ. ಕುಪ್ಪಿಗಿಡಕ್ಕೆ ಔಷಧೀಯ ಮಹತ್ವ್ತ್ತವಿದೆ. ಇದರ ಎಲೆ, ಎಳೆಯ ಕುಡಿಗಳು, ಬೇರು ಮತ್ತು ಹೂವುಗಳನ್ನು ಕಷಾಯ, ಪುಡಿ, ಹೊಸರಸ ಇವುಗಳ ರೂಪದಲ್ಲಿ ಜಂತುಹುಳುನಾಶಕವಾಗಿ, ಅಸ್ತಮ ಕೆಮ್ಮು ಮುಂತಾದ ಶ್ವಾಸಕೋಶಸಂಬಂಧಿ ರೋಗಗಳ ನಿವಾರಕವಾಗಿ, ವಿರೇಚಕವಾಗಿ, ಮನಶ್ಯಾಂತಿಕಾರಕವಾಗಿ, ವಾಂತಿಕಾರಕವಾಗಿ, ಸುಪ್ತ್ಯಾವಾಹಕವಾಗಿ ಬಳಸುತ್ತಾರೆ.      (ನೋಡಿ- ಅಕ್ಯಾಲಿಫ) 

         (ಎಚ್.ಕೆ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ